ಅಭಿಪ್ರಾಯ / ಸಲಹೆಗಳು

ಇತಿಹಾಸ

ಕರ್ನಾಟಕ ಪೊಲೀಸ್ ಇತಿಹಾಸ

ಪೀಠಿಕೆ

ಕರ್ನಾಟಕದಲ್ಲಿ ಪೊಲೀಸರನ್ನು ಈ ಹಿಂದೆ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಿದ್ದರು. ತೋಟಿಗಳು, ತಳವಾರರು, ಉಂಬಳಿದಾರರು, ನೀರಗಂಟಿ ಮುಂತಾದವರೆಲ್ಲರೂ ಈಗ ಆರಕ್ಷಕರು ನಿರ್ವಹಿಸುತ್ತಿರುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದುದರ ಜೊತೆಗೆ ಇತರ ಸರ್ಕಾರಿ ಕೆಲಸಗಳನ್ನು ಸಹ ಮಾಡಬೇಕಿತ್ತು. ಈಗಿರುವ ಪೊಲೀಸ್ ವ್ಯವಸ್ಥೆಗೆ ಅಡಿಪಾಯ ಹಾಕಿದ್ದು ಹಿಂದೆ ಪ್ರಥಮ ಐಜಿಪಿ ನೇಮಕಗೊಂಡಾಗ. ನಮ್ಮ ಪೊಲೀಸ್ ವ್ಯವಸ್ಥೆ ನಿಷ್ಪಕ್ಷಪಾತವಾದ ಸಂಸ್ಥೆಯಾಗಿ ಬೆಳೆದು ಹೆಮ್ಮರವಾಗಿದೆ.

ಇತಿಹಾಸ

1956 ರಲ್ಲಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂತು. 1965ರ ನವೆಂಬರ್‌ 1 ರಂದು ರಾಜ್ಯದ ಪೊಲೀಸ್ ಪಡೆಯ ಪ್ರಥಮ ಆರಕ್ಷಕ ಮಹಾ ನಿರೀಕ್ಷಕರನ್ನು ನೇಮಕ ಮಾಡಲಾಯಿತು ಅವರೇ ಶ್ರೀ. ಎಲ್. ರಿಕೆಟ್ಸ್. ಆರಕ್ಷಕ ಮಹಾ ನಿರೀಕ್ಷಕ ಅಂದರೆ ಇನ್ಸ್‌ಪೆಕ್ಟರ್‌ ಜನರಲ್ ಆಫ್ ಪೊಲೀಸರಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಮುನ್ನ ರಾಜ್ಯದ ರಕ್ಷಣಾದಳಗಳಿಗೆ ಈಗಿರುವ ಸ್ಥಾನಮಾನ, ರೂಪ, ಅಧಿಕಾರ ಮುಂತಾದವೇನೂ ಇರಲಿಲ್ಲ. 1838ನೇ ಇಸವಿಯ ವರದಿಯ ಪ್ರಕಾರ ಪೊಲೀಸರು ನಿರ್ವಹಿಸಬೇಕಾದ ಕಾರ್ಯಗಳನ್ನು ತಳವಾರರು, ತೋಟಿಗಳು, ನೀರಗಂಟಿಗಳು, ಕಾವಲುಗಾರರು, ಆಮರಗಾರರು, ಅಂಕಮಾಲೆ, ಪಟೇಲ, ಶ್ಯಾನುಭೋಗ ಮುಂತಾದವರು ನಿರ್ವಹಿಸುತ್ತಿದ್ದರು. ಹಳೇ ಮೈಸೂರು ರಾಜ್ಯದಲ್ಲಿ ಅಂದಿನ ರಾಜ ಮಹಾರಾಜರುಗಳ ಆಡಳಿತದಲ್ಲಿ ಪೊಲೀಸ್ ವ್ಯವಸ್ಥೆಯು ವಿಸ್ತಾರವಾಗಿ ಜಾರಿಗೆ ಬಂದಿತು.

ನ್ಯಾಯಾಂಗ ವ್ಯವಸ್ಥೆ

1856 ರಲ್ಲಿ ನ್ಯಾಯಾಂಗ ವ್ಯವಸ್ಥೆಗಾಗಿ ಜ್ಯುಡಿಷಿಯಲ್ ಕಮೀಷನರ್‌ ರವರ ನೇಮಕವಾಯಿತು. ಜುಡಿಷಿಯಲ್ ಕಮೀಷನರ್ ರವರು ಇನ್ಸ್‌ಪೆಕ್ಟರ್‌ ಜನರಲ್ ರವರನ್ನು ನೇಮಿಸಿದರು. 1873ರಲ್ಲಿ ಅವರಿಗೆ ಸಹಾಯಕ್ಕಾಗಿ ಡಿಐಜಿ ಒಬ್ಬರು ನೇಮಕಗೊಂಡರು. ಇದೇ ಅವಧಿಯಲ್ಲಿ ಪ್ರಥಮ ದರ್ಜೆ ಇನ್ಸ್‌ಪೆಕ್ಟರ್‌, ದ್ವಿತೀಯ ದರ್ಜೆ ಇನ್ಸ್‌ಪೆಕ್ಟರ್‌, ಜಮಾದಾರ್, ದಫೇದಾರ್, ಪೊಲೀಸ್ ಪೇದೆ ಹುದ್ದೆಗಳನ್ನು ರಚಿಸಲಾಯಿತು. ಜಿಲ್ಲಾಧಿಕಾರಿಗೆ ಶಿರಸ್ತೇದಾರರೇ ಹೆಡ್ ಕ್ವಾರ್ಟ್ರಸ್ ಅಸಿಸ್ಟೆಂಟ್. ಪೊಲೀಸ್ ಸಿಬ್ವಂದಿಗೆ ವೇತನ ಪಾವತಿ ಇತ್ಯಾದಿ ಇವರ ಕೆಲಸ ಆಗಿತ್ತು. ತಾಲ್ಲೂಕಿನಲ್ಲಿ ಅಮಲ್ದಾರರೇ ಪೊಲೀಸ್ ಮುಖ್ಯಾಧಿಕಾರಿ ಆಗಿ ಮುಂದುವರಿದರು. ಪ್ರಥಮ ದರ್ಜೆ ಇನ್ಸ್‌ಪೆಕ್ಟರ್‌, ದ್ವಿತೀಯ ದರ್ಜೆ ಇನ್ಸ್‌ಪೆಕ್ಟರ್‌ ರವರಿಗೆ ತಿಂಗಳಿಗೆ 10 ರೂ ಮನೆ ಭತ್ಯೆಯೊಂದಿಗೆ ಅನುಕ್ರಮವಾಗಿ 35 ರಿಂದ 50 ರೂ ವೇತನ ನಿಗದಿಪಡಿಸಲಾಯಿತು. ಜಮಾದಾರರು, ದಫೇದಾರ, ಪೊಲೀಸ್ ಪೇದೆಗಳು ಅನುಕ್ರಮವಾಗಿ ತಿಂಗಳಿಗೆ 20, 12, 8 ರೂ ವೇತನ ಪಡೆಯಲು ಆರಂಭಿಸಿದರು.

ಪ್ರಥಮ ಐಜಿಪಿ

1883ರಲ್ಲಿ ಪೊಲೀಸ್ ವ್ಯವಸ್ಥೆ ಪುನರ್‌ರಚಿಸಲು ಆಯೋಜಿಸಿದರು. ಆಗ 1885 ನೇ ನವಂಬರ್ 1 ರಂದು ಎಲ್. ರಿಕೆಟ್ಸ್, ಮೊದಲ ಹಳೆ ಮೈಸೂರು ರಾಜ್ಯಕ್ಕೆ ಐಜಿಪಿ ಆಗಿ ನೇಮಕ ಆದರು. ಇವರೇ ಹಳೇ ಮೈಸೂರಿನ ಪ್ರಥಮ ಐಜಿಪಿ. ರಿಕೆಟ್ಸ್ ನಂತರ ಅವರ ಸ್ಥಾನದಲ್ಲಿ ಶ್ರೀ. ವಿ.ಪಿ. ಮಾಧವರಾವ್ ಬಂದರು. ಬೆಂಗಳೂರು ಮೈಸೂರು ನಗರಗಳಿಗೆ ಪ್ರತ್ಯೇಕ ಪೊಲೀಸ್ ಪದ್ದತಿ ಜಾರಿಗೆ ತರಲಾಯಿತು. ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆಗೆ ಸರ್ಕಾರದ ಹಣ ಖರ್ಚು ಮಾಡಿತು. ಆದರೆ ಮೈಸೂರು ನಗರದ ಪೊಲೀಸ್ ನಿರ್ವಹಣೆಗೆ ಅಲ್ಲಿನ ನಗರಸಭೆ ಹಣ ಖರ್ಚು ಮಾಡಬೇಕಾಯಿತು. ಮೈಸೂರು, ಬೆಂಗಳೂರು ನಗರಗಳ ಕಥೆ ಒಂದಾಗಿದ್ದರೆ, ಯಳಂದೂರಿನ ಕಥೆಯೇ ಬೇರೆ. ಯಳಂದೂರು ಜಹಗೀರದಾರರೊಬ್ಬರಿಗೆ ಸೇರಿತ್ತು. ಅಲ್ಲಿನ ಪೊಲೀಸ್ ನಿರ್ವಹಣೆ ಅವರದೇ. ಅವರು ತಮಗೆ ಬೇಕಾದವರಿಗೆ ಪೊಲೀಸ್ ಕೆಲಸ ಒಪ್ಪಿಸುತ್ತಿದ್ದರು. ‌ಯಳಂದೂರಿಗೆ ಅಲ್ಲಿಯ ಜಹಗೀರದಾರರೇ ಪೊಲೀಸ್ ಸೂಪರಿಂಟೆಂಡೆಂಟ್. 1884 ರಲ್ಲಿ ಈ ವ್ಯವಸ್ಥೆ ಕೊನೆಗೊಂಡಿತು. ಈ ಮಧ್ಯೆ ಪೊಲೀಸರ ಶಿಕ್ಷಣ ಕುರಿತು ಗಮನ ನೀಡಲಾಯಿತು. ಅಮಲ್ದಾರರನ್ನು ಬಿಟ್ಟರೆ ಬಹುತೇಕ ಸಿಬ್ಬಂದಿ ಅನಕ್ಷರಸ್ಥರಾಗಿದ್ದರು, ಇವರನ್ನು ಅಕ್ಷರಾಭ್ಯಾಸ  ಮಾಡಿ ಎಂದು ಶ್ರೀ ವಿ.ಪಿ, ಮಾಧವರಾವ್ ಆದೇಶ ನೀಡಿದಾಗ ಅನಕ್ಷರಸ್ಥ ಪೊಲೀಸ್ ಸಿಬ್ಬಂದಿ ಹೋಬಳಿ ಶಾಲೆಗಳಿಗೆ ಹೋಗಲು ಆರಂಭಿಸಿದರು. 1892ರಲ್ಲಿ ಬೆಂಗಳೂರಿನಲ್ಲಿ ಜಮಾದಾರ, ದಫೇದಾರ ಪೊಲೀಸ್ ಪೇದೆಗಳಿಗೆ ತರಬೇತಿ ನೀಡುವ ಶಾಲೆ ತಲೆ ಎತ್ತಿ ನಿಂತಿತು. ವರ್ಷಕ್ಕೊಂದು ಬಾರಿ ಪರೀಕ್ಷೆ ನಡೆಸಿ ಪೊಲೀಸ್ ಪೇದೆಗಳ ಭರ್ತಿ ಕೆಲಸವನ್ನೂ ಅದು ಪ್ರಾರಂಭಿಸಿತು. ಬಡ್ತಿ ಕೊಡಲು ಸ್ಪರ್ಧಾತ್ಮಕ ಪರೀಕ್ಷೆಗಳೂ ನಡೆದವು. ಕಾಲ ಉರುಳಿದಂತೆ ಸಮಸ್ಯೆಗಳೂ ಕಾಣಿಸಿಕೊಂಡವು. ಯಾವ ಕ್ರಮ ಇಲ್ಲವೆ ಯಾವ ವಿಧಾನ ಅನುಸರಿಸಬೇಕು ಎಂಬುದೇ ಗೊತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಐಜಿಪಿ ಅವರಿಗೆ ಹೆಡ್‌ಕ್ವಾರ್ಟ್ರಸ್‌ ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿದ್ದ ಶ್ರೀ. ಎನ್. ಲಕ್ಷ್ಮಣ ಶಾಸ್ತ್ರಿಗಳು ಪೊಲೀಸರಿಗೆ ಮಾರ್ಗದರ್ಶನ ನೀಡುವ ಕೈಪಿಡಿ ಪ್ರಕಟಿಸಿದರು.

ಮಂತ್ರಿ

1912 ರಲ್ಲಿ ಐಜಿಪಿ ಆಗಿದ್ದ ಡಿ. ದೇವರಾಜ್ ಅರಸು ವೆಲ್ಲೂರಿಗೆ ಹೋಗಿ ಅಲ್ಲಿಯ ಪೊಲೀಸ್ ತರಬೇತಿ ಶಾಲೆಯ ಶಿಕ್ಷಣ ಪದ್ದತಿ ಅಭ್ಯಸಿಸಿದರು. ಇವರ ಕಾಲದಲ್ಲಿ ಬೆಂಗಳೂರು ಪೊಲೀಸ್ ತರಬೇತಿ ಶಾಲೆ ಅನೇಕ ಬದಲಾವಣೆಗಳನ್ನು ಕಂಡಿತು. ಅನಂತರ ಬಂದ ಸಿ. ಶ್ರೀಕಾತೇಶ್ವರ ಅಯ್ಯರ್ ತರಬೇತಿ ಶಾಲೆಗೆ ಕ್ರಿಮಿನಾಲಜಿ ಮ್ಯೂಸಿಯಂ ಒದಗಿಸಿದರು. ಐಜಿಪಿ, ದೇವರಾಜ ಅರಸರಿಗೆ ಬಡ್ತಿ ಸಿಕ್ಕಾಗ ಅವರು ಕೌನ್ಸಿಲರ್ಶಿಪ್ (ಸಂಪುಟ) ಸೇರಿದರು. ಐಜಿಪಿಗಳಲ್ಲಿ ಮಂತ್ರಿ ಆದವರ ಪೈಕಿ ಇವರೇ ಮೊದಲಿಗರು ಎಂದು ಹೇಳಬಹುದು. 1930ರಲ್ಲಿ ಎಫ್.ಎ.ಹ್ಯಾಮಿಲ್ಟನ್ ಅಧಿಕಾರಕ್ಕೆ ಬಂದರು. ಸುಮಾರು ಎಂಟು ವರ್ಷ ಐಜಿಪಿ ಆಗಿದ್ದರು. ಇವರ ಅಧಿಕಾರ ಅವಧಿಯಲ್ಲಿ ಪೊಲೀಸ್ ಇಲಾಖೆ ಬಹುತೇಕ ಬದಲಾವಣೆ ಕಂಡಿತು. ಕಾಲ ಉರುಳಿದಂತೆ, ಎತ್ತಿನ ಬಂಡಿ, ಟಾಂಗಾಗಳ ಸಂಖ್ಯೆ ಹೆಚ್ಚಿತು. ರಸ್ತೆಗೆ ಸೈಕಲ್‌ಗಳು ಇಳಿದವು ಕಾರುಗಳ ಒಡಾಟ ಪ್ರಾರಂಭ. ರಸ್ತೆ ಸಂಚಾರ ನಿಯಂತ್ರಣದ ಸಮಸ್ಯೆ ಉದ್ಭವಿಸಿತು. ಹ್ಯಾಮಿಲ್ಟನ್ ಆಗ ಮೈಸೂರು, ಬೆಂಗಳೂರು ನಗರಗಳಲ್ಲಿ ಸಂಚಾರ ವಿಭಾಗ ರಚಿಸಿದರು. ಹಲಸೂರುಗೇಟ್, ಉಪ್ಪಾರ ಪೇಟೆ ಹಾಗೂ ಕಲಾಸಿಪಾಳ್ಯಂ ಪೊಲೀಸ್ ಠಾಣೆಗಳು ಸಂಚಾರ ನಿಯಂತ್ರಣದ ಜವಾಬ್ದಾರಿ ಹೊತ್ತವು. ಮೈಸೂರು ನಗರದಲ್ಲಿ ಯುರೋಪಿಯನ್ ಹೆಡ್‌ಕಾನ್ಸ್‌ಟೇಬಲ್ ಸಂಚಾರ ವಿಭಾಗದ ಮುಖ್ಯಸ್ಥರಾದರು. ಆದರೂ ಇವರ ಸಂಬಳ, ಭತ್ಯೆಗೆ ಅಮಲ್ದಾರರ ಸಹಿ ಬೇಕೇ ಬೇಕಾಗಿತ್ತು. ಕ್ರಮೇಣ ಎರಡು ನಗರಗಳಲ್ಲಿ ಪೊಲಿಸ್ ಪೇದೆಗಳಿಗೆ ಸೈಕಲ್ ಸೌಲಭ್ಯ ಒದಗಿತು. ಬೆಂಗಳೂರಿನ ಪೇದೆಗಳಿಗೆ ತಿಂಗಳಿಗೆ 7 ಮತ್ತು 8 ಪೈಸೆ ಸೈಕಲ್ ಭತ್ಯೆ ನಿಗದಿಪಡಿಸಲಾಯಿತು.

ಪ್ರೊಬೇಷನರ್

1932ರಲ್ಲಿ ಸುಶಿಕ್ಷಿತರನ್ನು ಪೊಲೀಸ್ ಇಲಾಖೆಗೆ ನೇಮಕಾತಿ ಉದ್ದೇಶದಿಂದ, ನೇರವಾಗಿ ಪ್ರೊಬೇಷನರಿ ಪೊಲೀಸ್ ಇನ್ಸ್‌ಪೆಕ್ಟರ್‌ ಗಳ ನೇಮಕ ಮಾಡಲಾಯಿತು. ರಾಜ್ಯದ ಐಜಿಪಿಯೇ ನೇಮಕ ಅಧಿಕಾರಿ. ವರ್ಷಕ್ಕೆ ಹತ್ತರಂತೆ ಪ್ರೊಬೇಷನರ್ ಪೊಲೀಸ್ ಇನ್ಸ್‌ಪೆಕ್ಟರ್ ನೇಮಕವಾದಂತೆ ಇಲಾಖೆಯಲ್ಲಿ ಸುಶಿಕ್ಷಿತರು ಕಾಲಿಡಲು ಪ್ರಾರಂಭಿಸಿದರು. ಸಾಹಸ, ಧೈರ್ಯ ತೋರಿಸಿದ ಹಾಗು ಅಪ್ರತಿಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರೋತ್ಸಾಹಿಸಲು ಸರ್ಕಾರ ತೀರ್ಮಾನಿಸಿತು. ಗಂಡ ಭೇರುಂಡ ಪದಕ ನೀಡಿ ಗೌರವಿಸಲು ನಿರ್ಧಾರ(1935) ಮಾಡಲಾಯಿತು. ಈ ಪದಕ ಪಡೆದ ಪೇದೆ ಇಲ್ಲವೆ ಅಧಿಕಾರಿಗಳು ತಿಂಗಳಿಗೆ 3 ರಿಂದ 12 ರೂ ಹೆಚ್ಚು ವೇತನ ಪಡೆದರು. ವಾಹನಗಳ ಸಂಖ್ಯೆ ಹೆಚ್ಚಿತು. ಅವುಗಳ ರಿಜಿಸ್ಟ್ರೇಷನ್, ಚಾಲಕರಿಗೆ ಲೈಸನ್ಸ್ ಕೊಡಲು ಆರಂಭಿಸಿದಾಗ ಬಸ್ ವಾರಂಟ್ ಪದ್ದತಿ ಜಾರಿಗೆ ಬಂತು. ಇದಕ್ಕಾಗಿ ಐಜಿಪಿ ಕಛೇರಿ ಆವರಣದಲ್ಲಿ ವೇಬ್ರಿಜ್ ನಿರ್ಮಾಣ, ಬಸ್ ವಾರಂಟ್ ಉಸ್ತುವಾರಿಕೆಯನ್ನು ಪೊಲೀಸರಿಗೆ ವಹಿಸಲಾಯಿತು.ಈಗಲೂ ಇದು ಮುಂದುವರೆದಿದೆ.

ಚಳುವಳಿ

1939 - ಸ್ವಾತಂತ್ರ್ಯ ಚಳುವಳಿಯ ಗಾಳಿ ಹಳೇ ಮೈಸೂರಿಗೂ ಬೀಸಿತು. ಪೊಲೀಸರಿಗೆ ಸತ್ಯಾಗ್ರಹ ಧರಣಿ ಎಂಬುದರ ಬಿಸಿ ತಟ್ಟಿತು. ಎಚ್.ಸಿದ್ದಯ್ಯ, ಟಿ. ಸುಬ್ರಹ್ಮಣ್ಯಂ, ಮಳವಳ್ಳಿ ವೀರಪ್ಪ ಸೇರಿ ಎರಡು ಸಾವಿರ ಮಂದಿ ಬಂಧಿತರಾದರು. ಇವರ ಪೈಕಿ 1641 ಮಂದಿ ವಿರುದ್ದ ಪೊಲೀಸರು ಮೊಕದ್ದಮೆ ಹೂಡಿದಾಗ ಇವರಿಗೆಲ್ಲ ಶಿಕ್ಷೆಯಾಯಿತು ಇದು ಆಗಿನ ಕಾಲದ ಭಾರೀ ಸುದ್ದಿ. ಬೆಂಗಳೂರಿನ ಗಾತ್ರ ಹೆಚ್ಚಿತು. ಜನ ಸಂಖ್ಯೆಯೂ ಏರಿತು. ಅಪರಾಧಗಳು ಹೆಚ್ಚಾದವು, ಪೊಲೀಸರಿಗೆ ಹೆಚ್ಚು ಕೆಲಸದ ಭಾರ ಬಿತ್ತು. ಆಗ 1944ರಲ್ಲಿ ಬೆಂಗಳೂರು ನಗರಕ್ಕೆ ಎಂ.ಕೆ. ಸೋಮಪ್ಪ, ಡಿಐಜಿ ಆಗಿ ನೇಮಕಗೊಂಡರು. ಈ ಮಧ್ಯೆ ಬೆಂಗಳೂರು ನಗರದಲ್ಲಿ ಬಿ.ಎನ್.ಗೋಪಾಲರಾವ್ ಎಂಬುವವರು ಖಾಸಗಿ ಬ್ಯಾಂಕ್ ಪ್ರಾರಂಭಿಸಿದರು. ಬ್ಯಾಂಕ್ ವ್ಯವಹಾರ ಕುರಿತು ದೂರುಗಳು ಬಂದವು ಇದು ಸಾರ್ವಜನಿಕ ಗಮನ ಸೆಳೆಯಿತು. ಸರ್ಕಾರವು ನ್ಯಾಯಾಮೂರ್ತಿ ಆದ ಪಿ.ಮೇದಪ್ಪ ನಾಯಕತ್ವದಲ್ಲಿ ಎಸ್.ನಿಜಲಿಂಗಪ್ಪ. ಟೇಕೂರು ಸುಬ್ರಮಣ್ಯಂ, ಎನ್.ವೀರಪ್ಪ, ಎನ್.ಟಿ. ಬಾಬು ರೆಡ್ಡಿ ಇವರುಗಳ ಆಯೋಗವನ್ನು ನೇಮಿಸಿತು. ಪೊಲೀಸ್ ಅಧಿಕಾರಿ ಆಗಿದ್ದ ಬಾಬು ರೆಡ್ಡಿ ಆಯೋಗದ ಕಾರ್ಯದರ್ಶಿಗಳು ಆಗಿದ್ದರು. ಆಯೋಗದ ಶಿಫಾರಸ್ಸನ್ನು ಮನ್ನಿಸಿ ಬಾಬುರೆಡ್ಡಿ ಅವರಿಗೆ 150 ರೂ ಸಂಬಳ ಹೆಚ್ಚಿಸಿತು. 

ಕೊಡಗು

ಕೊಡಗಿನಲ್ಲಿ ರಾಜರ ಆಡಳಿತ ಇತ್ತು. ಅಲ್ಲಿ ಸಂಘಟಿತವಾದ ಪೊಲೀಸ್ ಪದ್ದತಿ ಇರಲಿಲ್ಲ ಜಮ್ಮಾ ರೈತರೇ ಪೊಲೀಸರಾಗಿದ್ದರು. ಅಪರಾಧಿಗಳಿಗೆ ಬಾರಕೋಲಿನಿಂದ ಹೊಡೆದು ಇಲ್ಲವೆ ಸಾರ್ವಜನಿಕವಾಗಿ ಅವರನ್ನು ಕೆಲಸಕ್ಕೆ ಹಚ್ಚಿ ಶಿಕ್ಷಿಸಲಾಗುತ್ತಿತ್ತು. ಬಡ್ತಿ ಪಡೆದ ಪಟೇಲರು, ಗೌಡರು, ಸುಬೇದಾರ್ ಆಗಿ ಕೆಲಸವಹಿಸಿಕೊಂಡರು. ಸಾರ್ವಜನಿಕರ ದೂರುಗಳ ವಿಚಾರಣೆಗಾಗಿ ದರ್ನಾಘಲ್ ಕಛೇರಿ ಸ್ಥಾಪಿಸಲಾಗಿತ್ತು. 1861ರಲ್ಲಿ ಪೊಲೀಸ್ ಶಾಸನ ಜಾರಿಗೆ ಬಂದಾಗ ಕೊಡಗಿಗೆ ಮುಖ್ಯ ಕಮೀಷನರ್ ಆಗಿ ಒಬ್ಬರನ್ನು ನೇಮಿಸಲಾಯಿತು. ಇವರೇ ಐಜಿಪಿ ಆಗಿದ್ದರು.

ಬಳ್ಳಾರಿ-ಮಂಗಳೂರು

ಹಳೇ ಮದ್ರಾಸ್ ರಾಜ್ಯಕ್ಕೆ ಸೇರಿದ (ಇಂದಿನ ತಮಿಳುನಾಡು) ಬಳ್ಳಾರಿ, ಮಂಗಳೂರು ಜಿಲ್ಲೆಗಳಲ್ಲಿ ಕಾವಲುಗಾರ, ಪಾಳೇಗಾರರೇ ಪೊಲೀಸರಾಗಿದ್ದರು. 1861ರಲ್ಲಿ ಪೊಲೀಸ್ ಶಾಸನ ಜಾರಿಗೆ ಬಂದಾಗ, ಈ ಜಿಲ್ಲೆಗಳಲ್ಲಿ ಕ್ರಮಬದ್ಧ ಪೊಲೀಸ್ ಉಸ್ತುವಾರಿಕೆ ವಿಧಾನ ಪ್ರಾರಂಭವಾಯಿತು. ಜಿಲ್ಲೆಗಳಿಗೆ ಪೊಲೀಸ್ ಸೂಪರಿಂಟೆಂಡೆಂಟ್, ಎ.ಎಸ್.ಪಿಗಳು ನೇಮಕಗೊಂಡರು. ಹಳೇ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಬೆಳಗಾವಿ, ಧಾರವಾಡ, ವಿಜಾಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬ್ರಿಟಿಷ್ ಆಡಳಿತದಿಂದಾಗಿ, 1827ರಲ್ಲಿಯೇ ಕ್ರಮಬದ್ದ ಪೊಲೀಸ್ ವ್ಯವಸ್ಥೆ ಇತ್ತು. ಈ ನಾಲ್ಕು ಜಿಲ್ಲೆಗಳಿಗೆ ಪುಣೆಯ ಡಿಐಜಿ ಮುಖ್ಯಾಧಿಕಾರಿ. ಎಸ್.ಎಸ್.ಎಲ್.ಸಿ ಇಲ್ಲವೆ ಇಂಟರ್ಮಿಡಿಯೇಟ್ ಆದವರನ್ನು ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನೇಮಿಸಲಾಗುತ್ತಿತ್ತು. ಲಂಡನ್ನಿನಲ್ಲಿ ತರಬೇತಿ ಪಡೆದು ಇಂಡಿಯನ್ ಪೊಲೀಸ್ ದರ್ಜೆಗೆ ಸೇರಿದವರನ್ನು ಅಸಿಸ್ಟೆಂಟ್ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಿಸಲಾಗುತ್ತಿತ್ತು. ಹತ್ತು ವರ್ಷಗಳ ನಂತರ ಜಿಲ್ಲಾ ಎಸ್.ಪಿ ಆಗಿ ಇವರಿಗೆ ಬಡ್ತಿ. ರಾಜ್ಯಗಳ ಪುನರ್ ರಚನೆ ನಂತರ ಬಂದ ಎಸ್.ಎನ್.ಹೊಸಳಿ ಕರ್ನಾಟಕ ರಾಜ್ಯದ ಕೊನೇ ಐಜಿ ಅಧಿಕಾರಿ. ಇವರ ಅಧಿಕಾರ ನಂತರವೇ ಐಪಿಎಸ್ ಅಧಿಕಾರಿಗಳು ಐಜಿಪಿ ಹುದ್ದೆಗೆ ಬರಲು ಆರಂಭಿಸಿದರು. 

ಹೈದ್ರಾಬಾದ್

ಹೈದ್ರಾಬಾದ್ ನಿಜಾಮರ ಸಂಸ್ಥಾನಕ್ಕೆ ಸೇರಿದ ಗುಲ್ಬರ್ಗ,ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಪೊಲೀಸ್‌ ವ್ಯವಸ್ಥೆಗೆ ಸದರ್-ಅಲಿ-ಮೋಹಂ ಇಲ್ಲವೆ ಪೊಲೀಸ್ ಮಿನಿಸ್ಟರ್ ಎಂಬ ಪದ ಬಳಕೆಯಲ್ಲಿತ್ತು. ತಾಲ್ಲೂಕುಗಳಲ್ಲಿ ಅಮೀನದಾರರು, ಇನ್ಸ್‌ಪೆಕ್ಟರ್ ಪೊಲೀಸ್ ಮುಖ್ಯಸ್ಥರು. ಇದರ ಜೊತೆಗೆ ನಿಜಾಮರ ದಿವಾನಿ ಪೊಲೀಸ್ ಹಾಗು ಜಹಗೀರ ಪೊಲೀಸ್ ಪದ್ದತಿಯೂ ಇತ್ತು. ಇಲ್ಲಿ ಇದ್ದ ಜಹಗೀರುದಾರರೇ ಜಹಗಾರ ಪೊಲೀಸರಾಗಿ ನೇಮಿಸಿದರು. ಜಹಗೀರುದಾರರ ಆಸ್ತಿ-ಸ್ವತ್ತು ರಕ್ಷಿಸುವುದೇ ಇವರ ಕೆಲಸ. 1948ರಲ್ಲಿ ಹೈದ್ರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನವಾದಾಗ ಈ ಪದ್ದತಿ ಕೊನೆಗೊಂಡಿತು. 

1956ರ ನಂತರ

1956 ರಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನೆಲಗಳು ಒಂದಾದವು. ರಾಜ್ಯ ಒಂದಾದಾಗ ಪೊಲೀಸರ ವೇಷ-ಭೂಷಣಗಳೂ ಒಂದಾದವು. ಎಲ್ಲರೂ ಸೇರಿ ಮೈಸೂರು ಪೊಲೀಸರಾದರು. ಕಾಲ ಚಕ್ರ ಉರುಳಿದಂತೆ ಶಾಂತಿ, ಕಾನೂನು ಅಪರಾಧದ ಸಮಸ್ಯೆಗಳು ಹೆಚ್ಚಿದವು ಅದಕ್ಕೆ ತಕ್ಕಂತೆ ಶಕ್ತಿ ಸಾಮರ್ಥ್ಯ, ಸೌಲಭ್ಯ ಹೆಚ್ಚಿಸಿಕೊಂಡ ಇಲಾಖೆ ಬೃಹತ್ ರೂಪದಲ್ಲಿ ಬೆಳೆದು ನಿಂತಿತು. ಅದಿನ್ನೂ ಬೆಳೆಯುತ್ತಲೇ ಇದೆ. ಆರಂಭದಲ್ಲಿ ಇಲಾಖೆ ಸಣ್ಣದಿದ್ದು, ಬೆಳಗಾವಿ, ಬೆಂಗಳೂರು, ಮೈಸೂರು ಹೀಗೆ ಮೂರು ಡಿಐಜಿ ರೇಂಜುಗಳನ್ನು ಹೊಂದಿತ್ತು. ಇದರ ಜೊತೆ ಸಣ್ಣ ಮೀಸಲು ಪಡೆ, ಇಂಟೆಲಿಜನ್ಸ್ ಹಾಗು ಸಿಐಡಿ ಶಾಖೆ ಹೊಂದಿತ್ತು. ಇಲಾಖೆಗೆ ಪಿ.ಕೆ. ಮೋನಪ್ಪ ಪ್ರಥಮ ಐಜಿಪಿ ಅಷ್ಟೇ ಅಲ್ಲ ರಾಜ್ಯದಲ್ಲಿ ಪ್ರಥಮ ಐಜಿಪಿ (ಇಂಡಿಯನ್ ಪೊಲೀಸ್ ಅಧಿಕಾರಿ ಕೂಡ). ಶ್ರೀ. ಮೋನಪ್ಪರವರು ನಿವೃತ್ತರಾದ ನಂತರ ಅವರ ಸ್ಥಾನಕ್ಕೆ ಶ್ರೀ. ಎಸ್.ಎನ್. ಹೊಸಾಳಿ ಬಂದರು. ರಾಜ್ಯದಲ್ಲಿ ಕೊನೇ ಐಜಿಪಿ ಅಧಿಕಾರಿ ಆಗಿದ್ದ ಹೊಸಾಳಿ ಅತಿ ಹೆಚ್ಚು ಕಾಲ ಅಂದರೆ 12-1/2 ವರ್ಷ ಐಜಿಪಿ ಆಗಿದ್ದರು. ರಾಜ್ಯ ಒಂದಾಗಿದ್ದರೂ ಗಡಿ ಅಂಚಿನ ಪ್ರದೇಶಗಳು ತುಂಬಾ ದೂರ ಆಗಿದ್ದವು. ತುರ್ತು ಪರಿಸ್ಥಿತಿಗಳಲ್ಲಿ ಈ ಪ್ರದೇಶಗಳಲ್ಲಿ ನಿಯಂತ್ರಣ ಕಷ್ಟವಾಯಿತು. ಕಲ್ಬುರ್ಗಿ ಕೇಂದ್ರವನ್ನಾಗಿ ಮಾಡಿ ಇನ್ನೊಂದು ಡಿಐಜಿ ರೇಂಜ್ ರಚನೆಯನ್ನು ಮಾಡಿತು. ಈ ಮಧ್ಯೆ ಪಕ್ಕದ ಗೋವ ಪೋರ್ಚಗೀಸರಿಂದ ವಿಮುಕ್ತಿ ಪಡೆಯಿತು. ಕೇಂದ್ರ ಸರ್ಕಾರ ಅಲ್ಲಿನ ಆಡಳಿತವನ್ನು ನಮ್ಮ ಪೊಲೀಸರಿಗೆ ವಹಿಸಿತು. ಅಲ್ಲಿ ಸಲ್ಲಿಸಿದ ಸೇವೆಗಾಗಿ ಕೇಂದ್ರ ಸರ್ಕಾರ ಕರ್ನಾಟಕದ ಪೊಲೀಸರಿಗೆ ಪ್ರಮಾಣಪತ್ರ ಕೊಟ್ಟಿತು. 

ಬೆಂಗಳೂರು ನಗರ

ಹರಿದು ಹಂಚಿ ಹೋದ ಕರ್ನಾಟಕ ನೆಲಗಳು ಒಂದುಗೂಡಿ ಆರು ವರ್ಷಗಳು ಕಳೆದವು. ಬೆಂಗಳೂರಿನ ಗಾತ್ರ ವಿಸ್ತಾರಗೊಂಡಿತು. ಇದರೊಂದಿಗೆ ಪೊಲೀಸ್ ಜವಾಬ್ದಾರಿಯೂ ಹೆಚ್ಚಿತು. 1963 ಜುಲೈ 4ರಂದು ಬೆಂಗಳೂರು ನಗರದಲ್ಲಿ ಪೊಲೀಸ್ ಕಮೀಷನರ್ ಆಡಳಿತದ ವ್ಯವಸ್ಥೆ ಜಾರಿಗೆ ಬಂತು. ಹಿರಿಯ ಡಿಐಜಿ ಸಿ.ಚಾಂಡಿ ಬೆಂಗಳೂರಿನ ಪ್ರಥಮ ಕಮೀಷನರ್. ಹಂಚಿ ಬಂದ ಕನ್ನಡ ಪ್ರದೇಶದಲ್ಲಿ ಪೊಲೀಸ್ ಶಾಸನ, ಪದ್ದತಿ, ವಿಧಾನಗಳು ಭಿನ್ನವಾಗಿದ್ದವು. ಇವುಗಳ ಏಕರೂಪಕ್ಕೆ ಸರ್ಕಾರ ಕೈಹಾಕಿತು ಪರಿಣಾಮ 1964 ರಲ್ಲಿ ಏಕರೂಪ ಶಾಸನ ಜಾರಿಗೆ ಬಂತು. ಸಮಸ್ಯೆ ಇಲ್ಲಿಗೇ ಮುಗಿಯಲಿಲ್ಲ ತೋಟಿ, ತಳವಾರ, ಪಟೇಲರು ಇನ್ನೂ ಪೊಲೀಸ್ ವ್ಯವಸ್ಥೆಯಲ್ಲೇ ಇದ್ದರು. ಇದಕ್ಕೊಂದು ರೂಪ ಕೊಡಲು 1969 ರಲ್ಲಿ ಗ್ರಾಮರಕ್ಷಕ ದಳ ಶಾಸನ ರಚನೆಯಾಯಿತು. ಶ್ರೀ. ಹೊಸಾಳಿ ರವರು, ಐಜಿಪಿ ಸ್ಥಾನದಲ್ಲಿ ಇರುವವರೆಗೆ  ಇಲಾಖೆಯ ವಿಂಗಡಣೆ ಇಲ್ಲವೆ ಐಜಿ ಸರಿಸಮಾನದ ಹುದ್ದೆಗಳ ರಚನೆಗೆ ಅವಕಾಶ ಕೊಡಲಿಲ್ಲ. ಇಲಾಖೆಯಲ್ಲಿ ಶಿಸ್ತು ಇರಬೇಕು ಎಂದರೆ ಇಲಾಖೆಗೆ ಒಬ್ಬನೇ ಯಜಮಾನ ಆಗಿರಬೇಕು ಎಂಬುದೇ ಇವರ ಅಭಿಪ್ರಾಯ ಆಗಿತ್ತು. 1972 ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿ, ತನ್ನ ಅಧಿಕಾರದ ಕೊನೆಯ ಗಳಿಗೆಯವರೆಗೆ ಶ್ರೀ ಅರಸು ರವರು ಗೃಹಖಾತೆಯನ್ನು ಇನ್ನೊಬ್ವರಿಗೆ ಬಿಟ್ಟು ಕೊಡಲಿಲ್ಲ. ಆದರೆ ಇವರ ಅಧಿಕಾರಾವಧಿಯಲ್ಲಿ ಬೃಹತ್ ರೂಪದಲ್ಲಿ ಬೆಳೆದ ಇಲಾಖೆಗೆ ಹೊಸ ರೂಪ ಬಂತು. ಇಂಟಲಿಜೆನ್ಸ್ ಹಾಗೂ ಸಿಐಡಿ ಶಾಖೆಗಳನ್ನು ಬೇರ್ಪಡಿಸಿ, ಡಿಐಜಿ ನಾಯಕತ್ವದಲ್ಲಿ ಪ್ರತ್ಯೇಕ ಶಾಖೆಗಳನ್ನು ರಚಿಸಲಾಯಿತು. ನಂತರ ಸಿಐಡಿ ಆಗಿದ್ದ ಶಾಖೆ ಸಿಒಡಿ ಆಗಿ ಐಜಿ ಕಛೇರಿಯಿಂದ ಕಾರ್ಲಟನ್ ಹೌಸ್‌ ಗೆ ರವಾನಿಸಲಾಯಿತು. ಬರೀ ಅಪರಾಧಗಳ ತನಿಖೆ ನಡೆಸುವುದೇ ಇದರ ಕೆಲಸ ಆಗಿತ್ತು. ಇದಕ್ಕೆ ಅರಣ್ಯ, ಆಹಾರ, ಅಪರಾಧ, ವಿಜ್ಞಾನ ಪ್ರಯೋಗ ಶಾಲೆಯ ಕೆಲಸ ಒಪ್ಪಿಸಲಾಯಿತು. ಕೆಲಸದ ಭಾರ ಹೆಚ್ಚಾದಾಗ ಅರಣ್ಯ, ಆಹಾರ ಶಾಖೆಗಳಿಗೆ ಮತ್ತೆ ಡಿಐಜಿ ನೇಮಕಮಾಡಲಾಯಿತು.

ಗೃಹರಕ್ಷಕದಳ ಹಾಗೂ ಅಗ್ನಿಶಾಮಕ ಪಡೆ

ಪೊಲೀಸ್ ಇಲಾಖೆಯ ಇನ್ನೊಂದು ಅಂಗ ಗೃಹರಕ್ಷಕದಳ ಹಾಗೂ ಅಗ್ನಿಶಾಮಕ ಪಡೆ. ತುರ್ತು ಪರಿಸ್ಥಿತಿಗಳಲ್ಲಿ ಇದರ ಕೆಲಸ ಅತಿ ಮುಖ್ಯ. ಸಾರ್ವಜನಿಕರು ಬಯಸಿದಲ್ಲಿ ಇದರ ಸೇವೆ ಸದಾ ಸಿದ್ದ. ಈಗ ಇದು ಪೊಲೀಸ್ ಇಲಾಖೆಯಿಂದ ಬೇರ್ಪಡಿಸಿ, ಇದಕ್ಕೊಬ್ಬ ಪ್ರತ್ಯೇಕ ಪೊಲೀಸ್ ಡೈರೆಕ್ಟರ್ ಜನರಲ್ (ಡಿಜಿಪಿ) ರವರನ್ನು ನೇಮಿಸಿ ಶ್ರೀ ಎ.ಆರ್. ನಿಜಾಮುದ್ದಿನ್ ರವರನ್ನು ಡಿಜಿಪಿರವರನ್ನಾಗಿ ನೇಮಿಸಲಾಯಿತು.

 

ಸಾರಿಗೆ ವ್ಯವಸ್ಥೆ

1928 ರಲ್ಲಿ ಸೈಕಲ್‌ಗಳನ್ನು ಹೊಂದಿದ್ದ ಪೊಲೀಸ್‌ ಇಲಾಖೆ ಇಂದು ತನ್ನದೇ ಆದ ಸಾರಿಗೆ ವ್ಯವಸ್ಥೆ ಪಡೆದಿದೆ. 1929-30 ರಲ್ಲಿ ಬರಿ ಮೂರು ಬಸ್ಸುಗಳನ್ನು ಹೊಂದಿದ್ದ ಇಲಾಖೆ ಇಂದು ಬಸ್ಸು, ಟೆಂಪೋ, ಜೀಪು, ಮೋಟಾರ್ ಸೈಕಲ್ ಕಾರು ಇತ್ಯಾದಿ ವಾಹನಗಳನ್ನು ಹೊಂದಿರುತ್ತದೆ.  ವಾಹನಗಳ ದುರಸ್ತಿ, ಚಾಲಕರಿಗೆ ತರಬೇತಿ ಹೊಣೆಯನ್ನು ಈ ಶಾಖೆ ನಿರ್ವಹಿಸುತ್ತಿದೆ.  

ಪ್ರಸ್ತುತ ಪೊಲೀಸ್‌ ಇಲಾಖೆಯಲ್ಲಿ ಹೊಸ  ಮೋಟಾರು ಸಾರಿಗೆ ವಾಹನಗಳನ್ನು ಖರೀದಿ ಮಾಡಿ ಘಟಕಗಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಅವುಗಳ ಮುಖಾಂತರ

     1. ತುರ್ತು ಪ್ರತಿಕ್ರಿಯೆಗಾಗಿ ಬೆಂಬಲ ವ್ಯವಸ್ಥೆ.

     2. ಹೆದ್ದಾರಿ ಗಸ್ತು ವಾಹನಗಳು

     3. ಪಿಂಕ್‌ ಹೊಯ್ಸಳ ( ಮಹಿಳೆಯರ ಸುರಕ್ಷತೆಗಾಗಿ)

     4. ಹೊಯ್ಸಳ ( ಠಾಣಾ ಗಸ್ತಿಗಾಗಿ)

     5. ಗರುಡಾ ಗಸ್ತಿಗಾಗಿ (ಮೈಸೂರು)

     6. ಚನ್ನಮ್ಮ ಗಸ್ತಿಗಾಗಿ ( ಹುಬ್ಬಳಿ-ಧಾರವಾಡ)

  ಇತ್ಯಾದಿ ಸೇವೆಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿದೆ.

ಸಶಸ್ತ್ರ ಮೀಸಲು ಪಡೆ

ರಾಜ್ಯ ಅಸ್ತಿತ್ವಕ್ಕೆ ಬಂದಾಗ ಸತ್ಯಾಗ್ರಹ ಚಳುವಳಿ, ಮುಷ್ಕರಗಳು ಅಷ್ಟಿರಲಿಲ್ಲ. ಇಂದು ಇವುಗಳ ಸಂಖ್ಯೆ ಹೆಚ್ಚಾಗಿದೆ. ಈ ಘಟನೆಗಳು ಸಂಭವಿಸಿದಾಗ ಪರಿಸ್ಥಿತಿ ನಿಯಂತ್ರಿಸಲು ಕರ್ನಾಟಕ ರಾಜ್ಯ ಮೀಸಲು ಪಡೆ ರಚಿಸಲಾಗಿದೆ. 1956 ರಲ್ಲಿ ರಾಜ್ಯ ಮೂರು ಬೆಟಾಲಿಯನ್(ಸರಾಸರಿ ಮೂರು ಸಾವಿರಕ್ಕಿಂತ ಹೆಚ್ಚು) ಪಡೆಗಳಿದ್ದು, ಪ್ರಸ್ತುತ 12 ಪಡೆಗಳು ಮತ್ತು 2 ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌ ಇದೆ. ಇವುಗಳಲ್ಲಿ 4 ಪಡೆಗಳ ಕೇಂದ್ರ ಸ್ಥಾನ ಬೆಂಗಳೂರಾಗಿದ್ದು, ಉಳಿದಂತೆ ಮೈಸೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಶಿವಮೊಗ್ಗ ಮತ್ತು ಶಿಗ್ಗಾವ್ ನಲ್ಲಿ ತಲಾ ಒಂದೊಂದು ಪಡೆಗಳು ಕಾರ್ಯ ನಿರ್ವಹಿಸುತ್ತಿದೆ. ಇದಲ್ಲದೆ ಪ್ರತಿ ಜಿಲ್ಲೆ ಮತ್ತು ನಗರದಲ್ಲಿ ಜಿಲ್ಲಾ ಮತ್ತು ನಗರ ಸಶಸ್ತ್ರ ಮೀಸಲು ಪಡೆಯು ಕಾರ್ಯನಿರ್ವಹಿಸುತ್ತಿವೆ.

ತರಬೇತಿ

ಇಲಾಖೆ ಬೆಳೆದಂತೆ ಪೊಲೀಸ್ ತರಬೇತಿ ವ್ಯವಸ್ಥೆ ಇರಲಿಲ್ಲ. ಬೆಂಗಳೂರಿನ ಕೃಷ್ಣರಾಜಪುರದಲ್ಲಿ ತರಬೇತಿ ಶಾಲೆಗೆ ಹೆಚ್ಚು ಮಂದಿಯನ್ನು ಕಳಿಸಲು ಅವಕಾಶ ಇರಲಿಲ್ಲ. ಪೊಲೀಸ್ ಪೇದೆ, ಸಬ್ ಇನ್ಸ್‌ಪೆಕ್ಟರ್‌ ಗಳ ನೇರ ನೇಮಕಾತಿ ಹಿನ್ನೆಲೆಯಲ್ಲಿ ತರಬೇತಿ ಶಾಲೆಗಳು ತಲೆ ಎತ್ತಿ ನಿಂತವು. 1956 ರಲ್ಲಿ ಬೀದರ್‌ನ ತರಬೇತಿ ಶಾಲೆಯನ್ನು ಮೈಸೂರಿಗೆ ವರ್ಗಾಯಿಸಲಾಯಿತು. ಕ್ರಮೇಣ ಅಲ್ಲಿ ಸಬ್ ಇನ್ಸ್‌ಪೆಕ್ಟರ್ ತರಬೇತಿ ಕಾಲೇಜು ಸ್ಥಾಪಿಸಲಾಯಿತು. 1992 ರಲ್ಲಿ ಕೆ.ಪಿ.ಎ ಎಂದು ಮರು ನಾಮಕರಣ ಮಾಡಲಾಯಿತು. 1958 ರಲ್ಲಿ ಚನ್ನಪಟ್ಟಣದಲ್ಲಿ ಪೊಲೀಸ್ ಪೇದೆಗಳಿಗಾಗಿ ಇನ್ನೊಂದು ಶಾಲೆ ಆರಂಭವಾಯಿತು. ಪ್ರಸ್ತುತ 16 ತರಬೇತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ವಿವಿಧ ರೀತಿಯ ತರಬೇತಿಯನ್ನು ನೀಡಲು ಅಂದರೆ, ಮೀಸಲು ಪಡೆಗಾಗಿ, ವಾಹನ ಚಾಲಕರಾಗಿ ಇತ್ಯಾದಿ ಶಾಲೆಗಳು ಆರಂಭವಾಯಿತು. 

ಮಹಿಳಾ ಪೊಲೀಸರು

ಬದಲಾದ ಸಾಮಾಜಿಕ ಪರಿಸ್ಥಿತಿಗೆ ತಕ್ಕಂತೆ ಇಲಾಖೆ ಮಹಿಳಾ ಪೊಲೀಸರನ್ನು ನೇಮಿಸಿಕೊಳ್ಳಲು ಆರಂಭಿಸಿತು. ರಾಜ್ಯಗಳ ಪುನರ್‌ ರಚನೆ ಆದಾಗ ಮುಂಬೈ ಕರ್ನಾಟಕದಿಂದ 9 ಮಂದಿ ಮಹಿಳಾ ಪೊಲೀಸರು ಬಂದಿದ್ದಾರೆ, ಇಂದು ಪ್ರತಿ ಠಾಣೆಯಲ್ಲಿ ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಮತಿ ಜಿಜಾ ಹರಿಸಿಂಗ್ ರಾಜ್ಯದಲ್ಲಿ  ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಪ್ರಥಮ ಕನ್ನಡಿಗರೆಂದರೆ ಶ್ರೀಮತಿ ಪ್ರಭಾರಾವ್ ಐಪಿಎಸ್.ಪ್ರಸ್ತುತ ರಾಜ್ಯದಲ್ಲಿ 36 ಮಹಿಳಾ ಪೊಲೀಸ್‌ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.

ಪೊಲೀಸ್ ಶ್ವಾನ ದಳ

1968ರಲ್ಲಿ ಪೊಲಿಸ್ ಶ್ವಾನಗಳ ಬಳಕೆ ಪ್ರಾರಂಭವಾಯಿತು. ಮದ್ರಾಸಿನಲ್ಲಿ ನಿವೃತ್ತರಾಗಿ ಬಂದ ಜೆ.ಬಿ. ಸ್ಯಾಮುಯಲ್ ಪೊಲೀಸ್ ಶ್ವಾನಪಡೆ ಆರಂಭಿಸಿದರು. ಇಂದು ರಾಜ್ಯದ 38 ಘಟಕಗಳಲ್ಲಿ ಶ್ವಾನ ಪಡೆ ಇದ್ದು, ಈ ಪಡೆಯು ಒಟ್ಟು 234 ಶ್ವಾನಗಳನ್ನು ಹೊಂದಿದೆ. ಪೊಲೀಸ್‌ ಶ್ವಾನಗಳಿಗೆ ಸಿಎಆರ್‌ ದಕ್ಷಿಣ, ಬೆಂಗಳೂರು ನಗರ ಇಲ್ಲಿ  ತರಬೇತಿ ಕೇಂದ್ರವಿರುತ್ತದೆ.

ಪೊಲಿಸ್ ಕಲ್ಯಾಣ ಸಹಾಯನಿಧಿ

ಪೊಲೀಸರ ಕಲ್ಯಾಣಕ್ಕಾಗಿ, ಪೊಲೀಸ್ ವಸತಿ ನಿರ್ಮಾಣ ಕಾರ್ಪೊರೇಷನ್, ಕರ್ನಾಟಕ ಪೊಲೀಸ್ ಕಲ್ಯಾಣ ನಿಧಿ, ಆರೋಗ್ಯ ಭಾಗ್ಯ ಮುಂತಾದವುಗಳನ್ನು ರಚಿಸಲಾಯಿತು.

ಇತ್ತೀಚಿನ ನವೀಕರಣ​ : 17-07-2021 04:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080